ಪಂಚವಟಿ -
	ಗೋದಾವರಿ ನದಿಯ ಉತ್ತರದ ದಂಡೆಯಲ್ಲಿ ನಾಸಿಕಾ ಕ್ಷೇತ್ರದ ಸಮೀಪದಲ್ಲಿರುವ ಒಂದು ಪ್ರದೇಶ. ಇಲ್ಲಿ ವಿಶಾಲವೂ ಉನ್ನತವೂ ಆಗಿರುವ ಐದು ಆಲದ ಮರಗಳಿರುವುದರಿಂದ ಈ ಪ್ರದೇಶಕ್ಕೆ ಪಂಚವಟಿಯೆಂದು ಹೆಸರು. ವನವಾಸ ಕಾಲದಲ್ಲಿ ಶ್ರೀರಾಮಲಕ್ಷ್ಮಣರು ಅಗಸ್ತ್ಯಾಶ್ರಮದಿಂದ ದಕ್ಷಿಣಕ್ಕೆ ಬರುವಾಗ ಅಗಸ್ತ್ಯನ ಅಪ್ಪಣೆಯಂತೆ ಆತನ ಆಶ್ರಮದಿಂದ ಎರಡು ಗಾವುದ ದೂರವಿರುವ ಪಂಚವಟಿಯಲ್ಲಿ ಆಶ್ರಮ ಕಟ್ಟಿಕೊಂಡಿದ್ದು, ಶೂರ್ಪನಖಿಯ ವಿರೂಪ ಕರಣವೂ ಖರದೂಷಣಾದಿ ರಾಕ್ಷಸರ ಸಂಹಾರವೂ ಸೀತಾಪಹರಣವೂ ನಡೆದದ್ದು ಇಲ್ಲಿಯೇ. ಈ ಘಟನೆಗಳ ಸವಿಸ್ತಾರವಾದ ವರ್ಣನೆ ಮೂಲರಾಮಾಯಣದಲ್ಲಿ ಬಂದಿದೆ.     (ವಿ.ಐ.)